ಪ್ರವರಸೇನ- 
	ಮಹಾರಾಷ್ಟ್ರೀ ಪ್ರಾಕೃತದಲ್ಲಿ ರಚಿತವಾಗಿರುವ ಸೇತುಬಂಧ ಕಾವ್ಯದ ಕರ್ತೃ. ಆದರೆ ಈ ಪ್ರವರಸೇನ ಯಾರು ಎಂಬ ವಿಷಯದಲ್ಲಿ ನಾನಾ ತರ್ಕವಿತರ್ಕಗಳು ತಲೆದೋರಿವೆ. ಇತಿಹಾಸ ನಾಲ್ವರನ್ನು ಗುರುತಿಸಿದೆ. ಇವರಲ್ಲಿ ಇಬ್ಬರು ಕಾಶ್ಮೀರದವರಾದರೆ, ಇಬ್ಬರು ಕುಂತಲದೇಶದವರು, ಕುರು ಪಾಂಡವವಂಶದವನಾದ ತೋರಮಾನನ ಮಗನಾದ ಎರಡನೆ ಪ್ರವರಸೇನನೇ ಸೇತುಬಂಧದ ಕರ್ತೃವೆಂದು ವಿದ್ವಾಂಸರನೇಕರ ಅಭಿಪ್ರಾಯ. ಈತನನ್ನು ಕುರಿತು ಅನೇಕ ವಿವರಗಳು ಕಲ್ಹಣನ ರಾಜತರಂಗಿಣಿಯಲ್ಲಿ ದೊರೆಯುತ್ತವೆ. ಆದರೆ ಬ್ಯೂಲ್ಹರ್ ವಾಕಾಟಕ ವಂಶೀಯನಾದ ರುದ್ರಸೇನನ ಮಗನಾದ ಎರಡನೆಯ ಪ್ರವರಸೇನನೇ ಕೃತಿಯ ಕರ್ತೃವೆಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈತನ ಕಾಲದ ಬಗ್ಗೆ ಏಕಾಭಿಪ್ರಾಯವಿಲ್ಲ. ಕ್ರಿ.ಶ. ಒಂದನೆಯ ಶತಮಾನದ ಕ್ರಿ.ಶ. ಆರನೆಯ ಶತಮಾನದವರೆಗೂ ಈತನ ಕಾಲದ ಗಡುವನ್ನು ಎಳೆಯಲಾಗಿದೆ. ಬಾಣ ಈತನನ್ನು ಪ್ರಶಂಸೆ ಮಾಡಿರುವುದರಿಂದ ಈತ ಐದನೆಯ ಶತಮಾನದ ಕವಿ ಎಂದು ಹೇಳುವುದುಂಟು. ವಿತಸ್ತಾ ಅಥವಾ ಇಂದಿನ ಝೀಲಮ್ ನದಿಗೆ ಪ್ರವರಸೇನ ಕಟ್ಟಿಸಿದ ಸೇತುವೆಯ ಸ್ಮಾರಕವಾಗಿ ಈ ಕೃತಿಯನ್ನು ರಚಿಸಲಾಗಿದೆಯೆಂದು ಭಾವಿಸಲಾಗಿದೆ. ಕಾಳಿದಾಸನೇ ಈ ಕೃತಿಯನ್ನು ರಚಿಸಿದನೆಂದೂ ವ್ಯಾಖ್ಯಾನಕಾರ ರಾಮದಾಸನ ಕಲ್ಪನೆ. ಸೇತುಬಂಧಕ್ಕೆ ಸೇತುಕಾವ್ಯ, ದಶಮುಖವಧೆ, ರಾವಣವಧ ಎಂಬ ಹೆಸರುಗಳೂ ಇವೆ. ರಾಮ ಲಂಕೆಯತ್ತ ಹೊರಟಿದ್ದರಿಂದ ಮೊದಲುಗೊಂಡು ಅಯೋಧ್ಯೆಯಲ್ಲಿ ಪಟ್ಟಾಭಿಷಕ್ತನಾಗುವವರೆಗಿನ ಶ್ರೀಮದ್ರಾಮಾಯಣದ ಕಥೆಯನ್ನು 15 ಆಶ್ವಾಸಗಳಲ್ಲಿ ಈ ಕೃತಿ ವರ್ಣಿಸುತ್ತದೆ. ಈ ಕೃತಿಯ 7 ಹಾಗೂ 8ನೆಯ ಆಶ್ವಾಸಗಳಲ್ಲಿ ಕಪಿಗಳು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುದುದರ ವಿವರವಿದೆ. ಕವಿ ಯಮಕಾಲಂಕಾರದಲ್ಲಿ ತನಗಿರುವ ನೈಪುಣ್ಯವನ್ನು ಮೆರೆದಿದ್ದಾನೆ. ರಾಮದಾಸ, ಕೃಷ್ಣ ಹಾಗೂ ಕುಲನಾಥರು ರಚಿಸಿದ ವ್ಯಾಖ್ಯಾನಗಳು ಈ ಕೃತಿಗಿವೆ. ಕಾವ್ಯ ಪ್ರಸಾದ ಗುಣದಿಂದ ತುಂಬಿವೆ.
(ಟಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ